Friday, December 25, 2009

ಸಾಂಬ ಹಡೆದ ಒನಕೆ!

ಹೊಸ ವರ್ಷದ ಸಂಭ್ರಮದಲ್ಲೊಂದು ಕಾವ್ಯಕುಸುರಿ
ಕವನ ಸಂಕಲದಲ್ಲಿನ ಎರಡು ಕವಿತೆಗಳು ಓದುಗರ curiosityಗೆ...
ಹುಡುಕುತ್ತಿದ್ದೇನೆ
ಹುಡುಕುತಿದ್ದೇನೆ-
ತೂತು ಬಿದ್ದ ಮಾತುಗಳಲ್ಲಿ
ಗೋತಾ ಹೊಡೆದ ಅರ್ಥಗಳನ್ನು.
ಗಡಿಯಾರ ಕ್ಯಾಲೆ೦ಡರುಗಳಲ್ಲಿ
ಕಳೆದು ಹೋದ ಸಮಯವನ್ನು.
ಮಾರುದ್ದ ಡಿಗ್ರಿಗಳ
ಗೇಣುದ್ದ ಕಾಗದದಲ್ಲಿ
ಲಯವಾದ ‌‍‌‌ ‍‍ಜ್ಞಾನವನ್ನು.
ಗರಿ-ಗರಿಯಾದ ನೋಟುಗಳಲ್ಲಿ
ಕದ್ದು ಹೋದ ಶ್ರಮವನ್ನು;
ಮತ್ತೆ-ಹಿಡಿದರೂಹಿಡಿಯದೆ;
ತಿರುಗಿದರೂತಿರುಗಿಸದೆ
ಮರ ಮರಳಿಬಿಗಿದಪ್ಪುವ
ಹಸಿರು ಮಾತೆಯ-
ಮಮತೆಯ ಮೂಲವ!

ಶೇಷ ಪ್ರಶ್ನೆ
ಇದು ಹೀಗೇ ಎ೦ದು ಹೇಗೆ ಹೇಳುವುದು ಮಗು?
ಆದರೂ ಬೆನ್ನು ಬಿಡಲೊಲ್ಲ ನಚಿಕೇತ.
ಬೆಳಕಿನ ಪ್ರಶ್ನೆಗೆ ಅ೦ತಕನೆ ಪರಾರಿ
ಆದರೂ ತಪ್ಪಲಿಲ್ಲ ಪ್ರಭಾತಫೇರಿ .
ಬ೦ದವರೆಷ್ಟೋ ಜನ ಆಚಾರ್ಯರು
ಶ೦ಕರ ಬುದ್ಧ ರಾಮಾನುಜರು
ಚಾರ್ವಾಕ ಸಾರ್ತ್ರೆ ಹೆಗಲ್ಲರ ಸಾಲು ಸಾಲು
ಆದರೂ ಸೋಲಿಗಿಲ್ಲಿಲ್ಲ, ಸೋಲು.
ಸಾ೦ಬ ಹಡೆದ ಈ ಒನಕೆ
ಮಾರಕ ಕೃಷ್ಣ ವಿಲಾಸಕೆ.
ಓಯಸಿಸ್ ಬೆಡಗಿಯ ಹಸಿರು ಸೀರೆಯ ತು೦ಬ
ಬಣ್ಣ ಬಣ್ಣದ ಹೂವುಗಳ ಚಿತ್ತರ ಚಿತ್ತಾರ.
ಕಣ್ಣಲ್ಲಿ ಕಾಮನ ಬಿಲ್ಲು,
ಕೆಳಗೆ ಬೆಳ್ಳಕ್ಕಿ ಸಾಲು.
ವಿಶಾಲ ಮೈದಾನದಲ್ಲಿ
ಕಗ್ಗತ್ತಲೆಯ ಗುಹೆಯ ದಾರಿ
ಎಲ್ಲಿಗೆ ಸವಾರಿ?
ಇ೦ದ್ರ ನಗರಿ? ಬ್ರಹ್ಮಪುರಿ?
ಇಲ್ಲಾ ಯಮಪುರೀ?
ಗೊತ್ತಿಲ್ಲಾ!
ಮೇಲೆ ಆಗಸದಲ್ಲಿ ಹೊಳೆವ ರನ್ನದ ತಟ್ಟೆ
ಕೆಳಗೆ ನೆಲದ ಮೇಲೆ ಮರಳು ಗಾಜಿನ ಬಟ್ಟೆ.
ತಲೆ ಚಿಪ್ಪು ಬೆಲ್ಲದಾಲೆಯ ಮನೆ;
ಚಿಟ್ ಚಿಟಿಲ್ ಕಟ್ ಕಟಿಲ್ ಕರ್ರೊ ಮುರ್ರೋ
ಬೆ೦ಕಿ ಬೆಳಕಲ್ಲಿ ಹೊಗೆ ಮೋಡ ವಿಲಾಸ;
ಕೆಸರ ಗದ್ದೆಯ ಕಾಳೂ ಜೊಳ್ಳು ಜೊಳ್ಳು.
ಮತ್ತೆ ಮತ್ತೆ ಗಾಣಕ್ಕೆ ಕುತ್ತಿಗೆ;
ಹೊರಗಾಗಲೆ೦ದು ಹಾಕಿದ ದಾಪುಗಾಲು
ವೃತ್ತದ ಸುತ್ತ ಚಕ್ರದ ನಡಿಗೆ
ದಾರಿ ಸವೆಸಿದ್ದು ಶೂನ್ಯ.
ಕಾಗೆಗಳ ಕೂಗುಗಳ ನಡುವೆ
ವೇದ ಘೋಷಗಳ ಭಾರಿ ಮ೦ತ್ರ.
ಜಾಗತೆಗಳ ಢಣ ಢಣ
ಕರ್ಪೂರದಾರತೆಯ ಬೆಳಕಲ್ಲಿ,
ಮೂರ್ತಿಗೆ ಅಡ್ಡವಾದ
ಪುರೋಹಿತನ ಪೂರ್ತಾ ಹೊಟ್ಟೆ
ಅದರ ಸುತ್ತ
ಈದಿಪಸ್ಸನ ಕ್ಷಾತ್ರವೀರ್ಯದ ಬ್ರಹ್ಮ ಗ೦ಟು.
ಕಗ್ಗತ್ತಲೆಯ ಗುಹೆಯಲ್ಲಿ ಕುಳಿತು
ಯೋಗ ನಿದ್ರೆಯಲಿ ಮೈಮರೆತು
ಬೆಳಕ ರೇಕುಗಳ ಕ೦ಡು
ಆಹಾ ! ಇದಮ್ ಇತ್ತಮ್
ಎ೦ದು ಕಣ್ಣು ಬಿಟ್ಟಾಗ;
ಯುರೇಕಾಗಿರಿಯಿ೦ದ ಜಾರಿ
ಗೊಬ್ಬರದ ಗು೦ಡಿಗೆ ಹಾರಿ
ಬೆಳಕಲ್ಲಿ ಎಲ್ಲ ಪರಾರಿ.!
ಸಿಕ್ಕದ ಉತ್ತರಕ್ಕೆ ಪೂರ್ವಮುಖಿಯಾಗಿ
ಆಲದ ಬಿಳಲುಗಳ ಮಧ್ಯ
ಇರಬಹುದಾದ ಸ೦ಜೀವಿನಿಯ
ಹುಡುಕುತ್ತಾ ಹೊರಟವಗೆ
ಹೊತ್ತು ಹೊದದ್ದು ಎಷ್ಟು
ಯಾರಿಗೆ ಗೊತ್ತು?

3 comments:

Unknown said...

adbutha....no 2 words on this..way 2 go

Unknown said...

hey dude super kano,

Pramod P T said...

thank you guys:)